ನಾಗದೇವತೆಗೆ ಪ್ರಿಯವಾದ ಆಶ್ಲೇಷಾ ಬಲಿ
ಪೀಠಿಕೆ:
ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ., ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.
ನಾಗಾಲಯಗಳು - ಆಶ್ಲೇಷಾ ಬಲಿ:
ಆಶ್ಲೇಷಾ ಬಲಿ ಎಂಬ ಪದಗಳನ್ನು ಕೇಳಿದೊಡನೆಯೇ ಶ್ರೀ ಪರಶುರಾಮ ಸೃಷ್ಟಿಯ ಕ್ಷೇತ್ರಗಳಾದ ಶ್ರೀ ಕುಕ್ಕೆಸುಬ್ರಹ್ಮಣ್ಯ, ಗುತ್ತಿಗಾರು ಸಮೀಪದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ, ಮಂಗಳೂರು ತಾಲೂಕಿನ ಕುಡುಪು, ಕಾಸರಗೋಡು ತಾಲೂಕಿನ ಮಂಜೇಶ್ವರ, ಬೆಳ್ತಂಗಡಿ ತಾಲೂಕಿನ ಬಳ್ಳಮಂಜ, ಪುತ್ತೂರು ತಾಲೂಕಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಶ್ರೀ ವಾಸುಕಿ ಸನ್ನಿಧಿ, ಆರ್ಯಾಪು ಗ್ರಾಮದ ಕಾರ್ಪಾಡಿ ಇಂತಹ ನಾಗಾಲಯಗಳಲ್ಲಿ ವಿಶೇಷವಾಗಿ ಆಶ್ಲೇಷ ನಕ್ಷತ್ರದ ತಿಥಿಯಂದು ಈ ಆರಾಧನೆ ನಡೆಯುತ್ತದೆ. ಪಂಚಮೀ ಅಥವಾ ಷಷ್ಠೀ ತಿಥಿಯಿದ್ದರೂ ಈ ಆರಾಧನೆಗೆ ಪ್ರಶಸ್ತವೆಂಬ ನಂಬಿಕೆಯಿದೆ.
ಆಶ್ಲೇಷ ನಕ್ಷತ್ರವು ತಾರಾ ಮಂಡಲದಲ್ಲಿ ಗುರುತಿಸಲಾದ ಇಪ್ಪತ್ತೇಳು ಮಹಾ ನಕ್ಷತ್ರಗಳಲ್ಲಿ ಒಂಭತ್ತನೆಯದು. ಜ್ಯೋತಿಷ್ಯ ಶಾಸ್ತ್ರಾಧಾರದಂತೆ ಪ್ರತಿನಕ್ಷತ್ರಕ್ಕೂ ಒಂದೊಂದು ನಕ್ಷತ್ರ ದೇವತೆ. ಆಶ್ಲೇಷ ನಕ್ಷತ್ರದ ನಕ್ಷತ್ರ ದೇವತೆಯು ಸರ್ಪ. ತನ್ನಿಂದ ಘಟಿಸಿದ ಪ್ರಮಾದದ ಪ್ರಾಯಶ್ಚಿತ್ತಕ್ಕಾಗಿ, ನಾಗದೇವತೆಯ ಅನುಗ್ರಹಕ್ಕಾಗಿ ನಾಗನಿಗೆ ಬಲಿ ಅಥವಾ ಆಹುತಿ ನೀಡುವ ಮೂಲಕ ನಡೆಸುವ ವಿಶೇಷ ಆರಾಧನೆಯೇ ಆಶ್ಲೇಷಾ ಬಲಿ.
ನಾಗನಿಗೇಕೀ ಮಹತ್ವ?:
ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಆದುದರಿಂದ ಸರ್ಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.
ಸರ್ಪಗಳ ಜನ್ಮ, ಸರ್ಪ ಸಂಕುಲ:
ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು. ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ. ಕುಕ್ಕೇ ಸುಬ್ರಹ್ಮಣ್ಯ ದೇವಸ್ತಾನದಲ್ಲಿ ಬಹುತೇಕ ಎಲ್ಲ ದಿನಗಳಲ್ಲೂ ಈ ಪೂಜೆ ನಡೆಯುತ್ತದೆ.
ಸರ್ಪ ಶಾಪ ಬರುವುದು ಹೇಗೆ?:
ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಲೇ ಇರುವುದು ಅನಿವಾರ್ಯವಾಗಿದೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ಆಶ್ಲೇಷಾ ಬಲಿಯನ್ನು ನೀಡಲಾಗುತ್ತದೆ.
ಆಶ್ಲೇಷಾ ಬಲಿ ವಿಧಾನ:
ಆಶ್ಲೇಷಾ ಬಲಿಗೆ ಪ್ರಶಸ್ತವಾದ ಶುಭದಿನದಂದು ಕುಟುಂಬದ ಯಜಮಾನನು ಕುಟುಂಬದ ಸದಸ್ಯರೊಡಗೂಡಿ ಶುಚಿರ್ಭೂತನಾಗಿ, ಉಪವಾಸವಿದ್ದು, ಕ್ಷೇತ್ರ ವಿಧಿಗನುಸಾರವಾಗಿ, ವೇದ ಪಾರಂಗತರಾದ ನಿಷ್ಠಾವಂತ ವಿಪ್ರೋತ್ತಮರ ದ್ವಾರಾ ಆಶ್ಲೇಷಾ ಬಲಿಯನ್ನು ನೀಡಬೇಕು. ಸಾಮೂಹಿಕವಾಗಿ ಈ ಪೂಜೆ ನಡೆಸುವುದೂ ಇದೆ. ವ್ಯಕ್ತಿಗತವಾಗಿ ನಡೆಸುವ ಪದ್ಧತಿಯೂ ಉಂಟು. ಶ್ರೀ ಗುರು ಗಣಪತಿ, ನವಶಕ್ತ್ಯಾದಿ ದೇವತೆಗಳನ್ನು ಆವಾಹಿಸಿ ಸಂಕಲ್ಪ ಮಾಡುವುದರೊಂದಿಗೆ ಆಶ್ಲೇಷಾ ಬಲಿ ವಿಧಾನ ಆರಂಭವಾಗುತ್ತದೆ. ತಳಿರು ತೋರಣಗಳಿಂದ ಅಲಂಕೃತವಾದ ನಾಗ ಸನ್ನಿಧಿಯಲ್ಲಿ ಹರಿದ್ರಾ, ಕುಂಕುಮ, ರಂಗೋಲಿ ಪುಡಿಗಳಿಂದ ಸರ್ಪ ನವಪದಮಂಡಲವನ್ನೂ ಆಶ್ಲೇಷಾ ಬಲಿ ಮಂಡಲವನ್ನೂ ಆಕರ್ಷಕವಾಗಿ ಬರೆಯಲಾಗುತ್ತದೆ. ಸರ್ಪ ನವಪದ ಮಂಡಲದ ಕೇಂದ್ರ ಪದದಲ್ಲಿ ಶ್ರೀ ವಾಸುಕೀ ನಾಗರಾಜನಿಗೆ